ಜ್ಞಾನೋದಯದ ಮುಖಾ ಮುಖಿ

ಜ್ಞಾನೋದಯದ ಮುಖಾ ಮುಖಿ (ಅನುಭವಗಳು)

ಮಾನವಕುಲದ ಮೇಲಿನ ಅವರ ಅಪಾರ ಅನುಕಂಪ ಮತ್ತು ಪ್ರೀತಿ

ಒಮ್ಮೆ ಇಂಗ್ಲೆಂಡ್‌ನಲ್ಲಿ ಪತ್ರಕರ್ತರೊಬ್ಬರು, "ನಿಮಗೆ ಎಂದಾದರೂ ನಿರಾಶೆಗಳಾಗಿವೆಯೇ ಎಂದು ಕೇಳಿದಾಗ, ಶ್ರೀ ಮಾತಾಜಿಯವರು, "ನನಗೆ ಯಾವುದೇ ಅಪಾಯಿಂಟ್‌ಮೆಂಟ್‌ಗಳೂ ಇರಲಿಲ್ಲ, ಹಾಗಾಗಿ ನಿರಾಶೆಗಳೂ ಇರಲಿಲ್ಲ!" ಎಂದು ಉತ್ತರಿಸಿದರು. ಇದರ ನಂತರ ಮೂಡಿದ ನಗು ಶ್ರೀ ಮಾತಾಜಿಯವರೊಂದಿಗಿನ ಅನೇಕ ಸಂಭಾಷಣೆಗಳ ವೈಶಿಷ್ಟ್ಯವಾಗಿತ್ತು; ಅವರ ಮಾತುಗಳು ಹಾಸ್ಯಭರಿತವಾಗಿ, ವಿಶಿಷ್ಟವಾಗಿ ಮತ್ತು ಹಲವು ಬಾರಿ ಆಶ್ಚರ್ಯಕರ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದವು.

ಹೆಚ್ಚಿನ ಜನರು ಯೋಚಿಸದ ವಿಷಯಗಳ ನಡುವಿನ ಸಂಬಂಧಗಳನ್ನು ಬಿಚ್ಚಿಡುವ ಸಾಮರ್ಥ್ಯ ಶ್ರೀ ಮಾತಾಜಿಯವರಿಗಿತ್ತು. ಇದು ಅವರ ಪ್ರವಚನಗಳು ಮತ್ತು ಕಥೆಗಳನ್ನು ಆಕರ್ಷಕವಾಗಿ, ಮಂತ್ರಮುಗ್ಧಗೊಳಿಸುವಂತೆ ಮತ್ತು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುತ್ತಿತ್ತು. ಶ್ರೀ ಮಾತಾಜಿಯವರು ಇಂತಹ ಸಾವಿರಾರು ಪ್ರವಚನಗಳನ್ನು ನೀಡಿದ್ದಾರೆ, ಅವು ಯಾವಾಗಲೂ ಬೋಧಪ್ರದ ಮತ್ತು ಜ್ಞಾನೋದಯವನ್ನು ನೀಡುವಂತಿದ್ದವು. ಸಾಧ್ಯವಾದಷ್ಟು ಹೆಚ್ಚಿನ ಜನರನ್ನು ತಲುಪಿ ಅವರಿಗೆ ಆತ್ಮಸಾಕ್ಷಾತ್ಕಾರವನ್ನು ಕರುಣಿಸಬೇಕೆಂಬ ಏಕೈಕ ದೃಢ ಸಂಕಲ್ಪದೊಂದಿಗೆ ಅವರು ಜಗತ್ತಿನಾದ್ಯಂತ ಸಂಚರಿಸಿದರು. ಇದರಿಂದಾಗಿ ಅವರ ವಿಸ್ತರಿಸಲ್ಪಟ್ಟ ಪಾಸ್‌ಪೋರ್ಟ್ ಸುಮಾರು ಒಂದು ಇಂಚು ದಪ್ಪವಾಗಿತ್ತು ಮತ್ತು ಅವರು ಭೇಟಿ ನೀಡಿದ ನಾನಾ ದೇಶಗಳ ಮುದ್ರೆಗಳನ್ನು ಹೊಂದಿತ್ತು.

ಅವರು ನಿಜವಾಗಿಯೂ ಸಾವಿರಾರು ಜನರನ್ನು ಭೇಟಿಯಾದರು, ಆದರೆ ಅದು ಕೇವಲ ಔಪಚಾರಿಕ "ಹಲೋ" ಮತ್ತು "ಬೈ ಬೈ" ಗಳ ಸರಣಿಯಾಗಿರಲಿಲ್ಲ. ತಮ್ಮ ಎದುರಿಗಿರುವ ವ್ಯಕ್ತಿ ಪ್ರಾಪಂಚಿಕ ಜ್ಞಾನವಿರುವ ಸಾಧಕನಾಗಿರಲಿ ಅಥವಾ ಒಬ್ಬ ಸಾಮಾನ್ಯ ಹಳ್ಳಿಗನಾಗಿರಲಿ, ಅವರೊಂದಿಗೆ ಒಂದಾಗುತ್ತಿದ್ದ ಶ್ರೀ ಮಾತಾಜಿಯವರು ಆ ವ್ಯಕ್ತಿಯ ಅಸ್ತಿತ್ವದ ಆಳಕ್ಕೆ ಇಳಿಯುತ್ತಿದ್ದರು. ಏಕೆಂದರೆ ಅವರಿಗೆ ಪ್ರತಿಯೊಬ್ಬ ವ್ಯಕ್ತಿಯೂ ಮುಖ್ಯವಾಗಿದ್ದರು ಮತ್ತು ಪ್ರತಿಯೊಬ್ಬರಲ್ಲೂ ಸಾಮರ್ಥ್ಯವಿತ್ತು.


ಇದೇ ಸುಪ್ತ ಸಾಮರ್ಥ್ಯವು ಶ್ರೀ ಮಾತಾಜಿಯವರಿಗೆ ತಮ್ಮ ಕಾರ್ಯವನ್ನು ಮಾಡಲು ಪ್ರೇರೇಪಿಸಿತು. ಪ್ರತಿಯೊಬ್ಬ ವ್ಯಕ್ತಿಯೂ ಆತ್ಮ ಸ್ವರೂಪಿಯಾಗುವ, ಪರಮಾತ್ಮನೊಂದಿಗೆ ಜೋಡಿಸಲ್ಪಡುವ ಮತ್ತು ಆತ್ಮಸಾಕ್ಷಾತ್ಕಾರವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಕೆಲವರು ಶ್ರೀ ಮಾತಾಜಿಯವರನ್ನು ಗುರುತಿಸಿದರು, ಇನ್ನು ಕೆಲವರು ಗುರುತಿಸಲಿಲ್ಲ. ಇದು ಅವರು ಯಾರು ಎಂಬುದಕ್ಕಿಂತ ಹೆಚ್ಚಾಗಿ, ಆಯಾ ವ್ಯಕ್ತಿಯ ಒಳಗಿನ ಸ್ಥಿತಿ ಮತ್ತು ಅವರ ಆಂತರಿಕ ಪ್ರಜ್ಞೆಯ ಮಟ್ಟವನ್ನು ಅವಲಂಬಿಸಿತ್ತು. ಕೆಲವು ಜನರು ಅವರನ್ನು ನೋಡಿದರು, ಗ್ರಹಿಸಿದರು ಮತ್ತು ಅವರ ಹತ್ತಿರ ಬಂದರು, ಆದರೆ ಇತರರು ದೂರ ಸರಿದರು...

ಹಾಗಾದರೆ ಶ್ರೀ ಮಾತಾಜಿ ಯಾರು? ಶ್ರೀ ಮಾತಾಜಿ ಏನಾಗಿದ್ದರು?

ಶ್ರೀ ಮಾತಾಜಿಯವರು ಒಬ್ಬ ಗುರುಗಳಾಗಿದ್ದರು. ಹಾಗಾದರೆ ಗುರು ಎಂದರೆ ಯಾರು? – 'ಗುರು' ಎಂಬ ಪದಕ್ಕೆ ನಿರ್ದಿಷ್ಟ ಅರ್ಥವಿದೆ: 'ಗು' ಎಂದರೆ ಅಜ್ಞಾನ, 'ರು' ಎಂದರೆ ನಿವಾರಿಸುವವನು. ಆದ್ದರಿಂದ, ಮಾನವ ಸ್ಥಿತಿಯನ್ನು ಆವರಿಸಿರುವ ಆಧ್ಯಾತ್ಮಿಕ ಅಜ್ಞಾನ ಮತ್ತು ಭ್ರಮೆಯನ್ನು ದೂರಾಗಿಸಲು ಶಕ್ತರಾದವರೇ ಗುರು.


ಅವರ ಹತ್ತಿರ ಬಂದ ಅನೇಕರಿಗೆ ಶ್ರೀ ಮಾತಾಜಿಯವರು ಪರಿಪೂರ್ಣ ಜ್ಞಾನದ ಸಾಕಾರ ರೂಪ, ಜಗತ್ತಿನ ಕೇಂದ್ರ ಬಿಂದು ಮತ್ತು ದೈವೀ ಮಾತೆ ಎಂಬುದು ಮನವರಿಕೆಯಾಯಿತು. ಹೇಗೋ, ಜನರ ಆಂತರಿಕ ಸಮಸ್ಯೆಗಳನ್ನು ಅವರೇ ಪರಿಹರಿಸಿಕೊಳ್ಳುವಂತೆ ಮಾಡುವ ಜನ್ಮಜಾತ ಸಾಮರ್ಥ್ಯ ಅವರಲ್ಲಿತ್ತು. ಅವರ ಆಕರ್ಷಣೆಯು ಒಬ್ಬ ಪ್ರೀತಿಯ ತೋಟಗಾರನಂತಿತ್ತು; ಬೀಜಗಳು ಮೊಳಕೆಯೊಡೆದು, ಗಿಡವಾಗಿ ಬೆಳೆದು, ಹೂ ಬಿಟ್ಟು ಫಲ ನೀಡುವಂತೆ ಅವರು ಪ್ರತಿಯೊಬ್ಬ ವ್ಯಕ್ತಿಯ ಆಂತರಿಕ ವಿಕಾಸಕ್ಕೆ ಕಾರಣರಾಗುತ್ತಿದ್ದರು.

“ಜ್ಞಾನವು ಪ್ರಕಾಶಮಾನವಾದುದು ಮತ್ತು ಎಂದಿಗೂ ಮಸುಕಾಗದಂಥದ್ದು

ಅದನ್ನು ಪ್ರೀತಿಸುವವರು ಅದನ್ನು ಸುಲಭವಾಗಿ ಗ್ರಹಿಸುತ್ತಾರೆ,

ಮತ್ತು ಅದನ್ನು ಹುಡುಕುವವರಿಗೆ ಅದು ಸಿಗುತ್ತದೆ.

ಅದನ್ನು ಬಯಸುವವರಿಗೆ ಅದು ತನ್ನನ್ನು ತಾನೇ ಬೇಗನೆ ಪರಿಚಯಿಸಿಕೊಳ್ಳುತ್ತದೆ.

… ತನಗೆ ಅರ್ಹರಾದವರನ್ನು ಅದು ಹುಡುಕುತ್ತಾ ಸಾಗುತ್ತದೆ,

ಮತ್ತು ಅವರ ಹಾದಿಯಲ್ಲಿ ಕೃಪೆಯಿಂದ ಪ್ರಕಟವಾಗುತ್ತದೆ.”

ಸೊಲೊಮನ್‌ನ ಜ್ಞಾನೋಕ್ತಿ, ಅಧ್ಯಾಯ 6, ವಚನಗಳು 12–17

ಆದಾಗ್ಯೂ ಅವರ ಸಂದೇಶವು ದೃಢವಾಗಿತ್ತು: 'ನಿಮ್ಮ ಸ್ವಂತ ಗುರುಗಳಾಗಿ, ಆತ್ಮಸ್ವರೂಪಿಯಾಗಿ'. ಆದರೆ ಇದು ಕೆಲವೊಮ್ಮೆ ಸ್ವಲ್ಪ ಕಷ್ಟಕರವಾಗಿ ಪರಿಣಮಿಸುತ್ತಿತ್ತು. ಇದಕ್ಕೆ ದೃಢಸಂಕಲ್ಪ ಮತ್ತು ಶಿಸ್ತು ಅಗತ್ಯವಾಗಿತ್ತು.

ದುರ್ಬಲ ಹಾಗೂ ಚದುರಿದ ಗಮನ, ಗೊಂದಲ, ಸೋಂಬೇರಿತನ, ಕಡಿಮೆ ಆತ್ಮವಿಶ್ವಾಸ ಮತ್ತು ಇತರ ಅಸಂಖ್ಯಾತ ಸಮಸ್ಯೆಗಳು ಪ್ರತಿಯೊಬ್ಬ ವ್ಯಕ್ತಿಯು ತನ್ನ ಮೇಲೆ ತಾನು ಕೆಲಸ ಮಾಡುವ, ತನ್ನನ್ನು ತಾನು ಕಾಪಾಡಿಕೊಳ್ಳುವ ಮತ್ತು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವ ದೃಢಸಂಕಲ್ಪಕ್ಕೆ ಅಡ್ಡಿಯಾಗುತ್ತಿದ್ದವು.

ಈ ಪ್ರಕ್ರಿಯೆಯಲ್ಲಿ, ಒಬ್ಬ ಗುರುವಿನ ಸ್ಥಾನದಲ್ಲಿ ಶ್ರೀ ಮಾತಾಜಿಯವರು ಹುಲಿಯಂತೆ ಉಗ್ರವಾಗಿ ಹಾಗೂ ನೋಡಲು ಭಯಭಕ್ತಿ ಮೂಡಿಸುವಂತಿರಬಲ್ಲವರಾಗಿದ್ದರು. ಅದೇ ಸಮಯದಲ್ಲಿ ಒಬ್ಬ ತಾಯಿಯಾಗಿ ಅವರು ಅಷ್ಟೇ ಮೃದು, ತಾಳ್ಮೆ ಮತ್ತು ಸಾಂತ್ವನ ನೀಡುವವರಾಗಿದ್ದರು. ತಾಯಿಯ ವಾತ್ಸಲ್ಯದಿಂದ ಅವರು ಪ್ರತಿಯೊಬ್ಬರನ್ನು ಪ್ರೇರೇಪಿಸಲು ಮತ್ತು ಉನ್ನತೀಕರಿಸಲು ಪ್ರಯತ್ನಿಸುತ್ತಿದ್ದರು; ಅವರು ದಾರಿ ತಪ್ಪುತ್ತಿರುವುದನ್ನು ಕಂಡಾಗಲೂ, ಅವರತ್ತ ಕೈಚಾಚಿ ಅವರನ್ನು ಮತ್ತೆ ಸರಿಯಾದ ಹಾದಿಗೆ ತರಲು ಸದಾ ಸಿದ್ಧರಾಗಿದ್ದರು.

ನೀವು ಅವರ ಗಮನದ ವ್ಯಾಪ್ತಿಯಲ್ಲಿದ್ದಾಗ, ನೀವು ಸ್ವತಃ ವಿಕಾಸದ (evolution) ಹಸ್ತಗಳಲ್ಲಿದ್ದೀರಿ ಎಂಬ ಭಾವನೆ ಮೂಡುತ್ತಿತ್ತು. ಅವರ ಕಿರುನಗು ಸಾಂತ್ವನ ಹಾಗೂ ವಿಮೋಚನೆಯನ್ನು ನೀಡುತ್ತಿತ್ತು. ಅವರ ಧ್ವನಿಯು ನೆರವು ಮತ್ತು ಮಾರ್ಗದರ್ಶನವನ್ನು ನೀಡುತ್ತಿತ್ತು. ಆದರೆ ಅವರ ಮಾತುಗಳನ್ನು ಆಲಿಸಬೇಕೋ ಬೇಡವೋ ಎಂಬ ಆಯ್ಕೆ ಯಾವಾಗಲೂ ಆಯಾ ವ್ಯಕ್ತಿಯ ಹೃದಯಕ್ಕೇ ಬಿಟ್ಟಿರುತ್ತಿತ್ತು. ತಮ್ಮ ತಿಳುವಳಿಕೆಯ ಮಟ್ಟಕ್ಕೆ ತಕ್ಕಂತೆ, ಪ್ರತಿಯೊಬ್ಬರೂ ಶ್ರೀ ಮಾತಾಜಿಯವರನ್ನು ವಿಶಿಷ್ಟವಾದ ರೀತಿಯಲ್ಲಿ ಅನುಭವಿಸಿದರು.

ಜನರನ್ನು ನಿಭಾಯಿಸುವಲ್ಲಿ ಅವರಿಗಿದ್ದ ಸೂಕ್ಷ್ಮತೆ ಅಪಾರವಾಗಿತ್ತು. ಬ್ಲೇಡ್‌ನಷ್ಟೇ ತೀಕ್ಷ್ಣವಾದ ನಿಖರತೆಯೊಂದಿಗೆ ಅವರು ಯಾವುದೇ ಪರಿಸ್ಥಿತಿಯನ್ನು ಕ್ಷಣಾರ್ಧದಲ್ಲಿ ಗ್ರಹಿಸುತ್ತಿದ್ದರು; ಅವರ ತೀಕ್ಷ್ಣ ಗಮನವು ಪರಿಸ್ಥಿತಿಯ ಆಳಕ್ಕೆ ಇಳಿದು, ಅಲ್ಲಿ ಏನು ಹೇಳಲಾಗುತ್ತಿದೆ ಮತ್ತು ಏನು ಹೇಳದೆ ಮರೆಮಾಡಲಾಗಿದೆ ಎಂಬುದನ್ನೂ ಸಹ ಅರಿಯುತ್ತಿತ್ತು.

ಎಲ್ಲರನ್ನೂ ಆವರಿಸಿಕೊಳ್ಳುವಂತಹ ಅವರ ಹಾಸ್ಯ ಪ್ರವೃತ್ತಿ, ಅವರ ಅದ್ಭುತವಾದ ಸಾಕ್ಷಿ ಭಾವ (witnessing power) ಮತ್ತು ಜೀವನದ ಏರಿಳಿತಗಳನ್ನು ಮುಕ್ತವಾಗಿ ಆಸ್ವಾದಿಸುವ ಅವರ ಶೈಲಿ ವಿಮೋಚನೆ ನೀಡುವಂತಿತ್ತು. ಶ್ರೀ ಮಾತಾಜಿಯವರ ಬಗ್ಗೆ ಜನರ ನೆನಪುಗಳೆಲ್ಲವೂ ಒಂದೇ ಭಾವನೆಯನ್ನು ಪ್ರತಿಧ್ವನಿಸುತ್ತವೆ; ಅದೆಂದರೆ, ತಮಗೆ ಹೇಗೋ ಶ್ರೀ ಮಾತಾಜಿ ಮತ್ತು ಅವರ ಬೋಧನೆಗಳ ಸಂಪರ್ಕ ಸಿಕ್ಕಿದ್ದು ತಮ್ಮ ಭಾಗ್ಯ, ಸೌಭಾಗ್ಯ ಅಥವಾ ದೈವೀ ಅದೃಷ್ಟ ಎಂಬ ಧನ್ಯತಾ ಭಾವ.


ಶ್ರೀ ಮಾತಾಜಿಯವರ ಜ್ಞಾನ ಮತ್ತು ವಿವೇಕದ ಸಂದೇಶವು ಯಾವಾಗಲೂ ಸ್ಥಿರವಾಗಿದ್ದು ಒಂದೇ ಆಗಿರುತ್ತದೆ. ಅವರು ಹೇಳಿದಂತೆ:

​"ಸತ್ಯದ ಅನ್ವೇಷಕರೆಲ್ಲರಿಗೂ ನಾನು ಪ್ರಣಾಮಗಳನ್ನು ಸಲ್ಲಿಸುತ್ತೇನೆ"
​"ನೀವು ಆತ್ಮಸ್ವರೂಪಿಯಾಗಿದ್ದೀರಿ"
​"ನಿಮ್ಮೊಳಗೆ ಒಂದು ಶಕ್ತಿ ನೆಲೆಸಿದೆ"
​"ನಿಮ್ಮ ಸ್ವಂತ ಗುರುಗಳಾಗಿ"
​"ಆನಂದಿಸಿ!"
​"ನೀವು ನಿಮ್ಮ ಆತ್ಮಸಾಕ್ಷಾತ್ಕಾರವನ್ನು ಪಡೆದುಕೊಳ್ಳಬಹುದು. ನಿಮ್ಮ ಕೈ ಅಂಗೈಗಳಲ್ಲಿ ಮತ್ತು ತಲೆಯ ಮೇಲ್ಭಾಗದಲ್ಲಿ ತಂಪಾದ ಗಾಳಿಯ (ತಂಪು ಅಲೆಗಳ) ಅನುಭವವನ್ನು ನೀವು ಪಡೆಯಬಹುದು."

ಮೂಲ ಸಂದೇಶವು ಎಂದಿಗೂ ಬದಲಾಗಲಿಲ್ಲ. ಇರುವ ಒಂದೇ ಪ್ರಶ್ನೆಯೆಂದರೆ, ಎಷ್ಟು ಜನರು ಈ ಸಂದೇಶವನ್ನು ಕೇಳುತ್ತಾರೆ ಮತ್ತು ತಮ್ಮ ನೈಜ ಸ್ವರೂಪವನ್ನು ಕಂಡುಕೊಳ್ಳುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ?

ಶ್ರೀ ಮಾತಾಜಿಯವರ ಪರಂಪರೆಯು ಅವರ ಸಂದೇಶವನ್ನು ಆಲಿಸಿ, ಅವರ ಕೊಡುಗೆಯನ್ನು ಹೃದಯಪೂರ್ವಕವಾಗಿ ಸ್ವೀಕರಿಸಿ, 'ಸಹಜ ಯೋಗ'ವನ್ನು ಆನಂದಿಸುತ್ತಾ ಮತ್ತು ಅದನ್ನು ಇತರರಿಗೂ ಪಸರಿಸುತ್ತಿರುವವರಲ್ಲಿ ಇಂದಿಗೂ ಜೀವಂತವಾಗಿದೆ.

ಅವರ ದಿವ್ಯ ಸನ್ನಿಧಾನದ ಅನುಭೂತಿಯು ನಮ್ಮ ಕೈಗಳಲ್ಲಿ ಮತ್ತು ನಮ್ಮ ತಲೆಯ ಮೇಲೆ ತಂಪಾದ ಗಾಳಿಯ ರೂಪದಲ್ಲಿ ತಿಳಿಯುತ್ತದೆ. ಅವರ ಕೃಪೆಯು ನಮ್ಮ ಹೃದಯಗಳನ್ನು ಮೃದುಗೊಳಿಸುತ್ತದೆ ಮತ್ತು ದೈವಿಕ ಪ್ರೀತಿಯು ನಮ್ಮ ಇಡೀ ಅಸ್ತಿತ್ವದಲ್ಲಿ ಪ್ರತಿಧ್ವನಿಸುತ್ತದೆ.

SHARE PAGE