ಆಜ್ಞಾ ಚಕ್ರ
ಕ್ಷಮೆಯ ಶಕ್ತಿ
ಈ ಚಕ್ರದ ಸಾರವೇ ಕ್ಷಮೆ. ನಾವು ಕ್ಷಮಿಸದೇ ಇದ್ದಾಗ , ಈ ಚಕ್ರವು ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತದೆ. ನಮಗೆ ನಾವೇ ಹಾನಿ ಮಾಡಿಕೊಳ್ಳುತ್ತೇವೆ. ಕ್ಷಮೆ ಎಂದರೆ ಕೋಪ, ದ್ವೇಷ ಮತ್ತು ಅಸಮಾಧಾನವನ್ನು ಬಿಡುವ ಶಕ್ತಿ. ಆತ್ಮಸಾಕ್ಷಾತ್ಕಾರಕ್ಕಿಂತ ಮೊದಲು ಇದು ಸುಲಭವಾಗಿರಲಿಲ್ಲ . ಆದರೆ ನಿಜವಾದ ಹೃದಯದಿಂದ “ನಾನು ಕ್ಷಮಿಸುತ್ತೇನೆ” ಎಂದು ಸರಳವಾಗಿ ಹೇಳುವುದರಿಂದ, ನಮ್ಮ ಕುಂಡಲಿನಿ(opens in new tab) ಈ ಕೇಂದ್ರವನ್ನು ಭೇದಿಸಿ ನಮ್ಮ ಗಮನವನ್ನು ದೈವಿಕ ಮೌನದ ಲೋಕಕ್ಕೆ ಎಳೆಯುತ್ತದೆ. ಇದರಿಂದ ಧ್ಯಾನದಲ್ಲಿ ನಾವು ನಿರ್ವಿಚಾರ ಸ್ಥಿತಿಯಲ್ಲಿ ಸುಲಭವಾಗಿ ಸ್ಥಿರವಾಗಬಹುದು.
ಕ್ಷಮೆಯ ಶಕ್ತಿಯ ಮೂಲಕ ನಾವು ನಮ್ಮ ಆತ್ಮದ ಉನ್ನತ ಸ್ವಭಾವಗಳನ್ನು ಅರಿಯುತ್ತೇವೆ ಅದೇ – ವಿನಯ, ಉದಾರತೆ ಹಾಗೂ ಎಲ್ಲರ ಮೇಲಿನ ಅನಂತ ಪ್ರೀತಿ ಮತ್ತು ಕರುಣೆ. ಧ್ಯಾನದ ಮೂಲಕ, ವಿಕಸಿತ ಆಜ್ಞಾ ಚಕ್ರದ ಪರಿಪಕ್ವತೆ ನಮ್ಮ ಅಹಂಕಾರ, ಸಂಸ್ಕಾರಗಳು, ಅಭ್ಯಾಸಗಳು, ಜಾತೀಯ ಭ್ರಮೆಗಳು ಮತ್ತು ಎಲ್ಲ ತಪ್ಪು ಗುರುತಿಸಿಕೊಳ್ಳುವಿಕೆಗಳನ್ನುಕಡಿಮೆಮಾಡುತ್ತದೆ . ಶಾಸ್ತ್ರಗಳಲ್ಲಿ ಇದನ್ನು “ಇಕ್ಕಟ್ಟಿನ ಬಾಗಿಲು” ಎಂದು ವರ್ಣಿಸಲಾಗಿದೆ, ಏಕೆಂದರೆ ಇದೇ ನಮ್ಮ ಚೇತನವನ್ನು ಅದರ ಅಂತಿಮ ಗುರಿಯಾದ ಏಳನೇ ಕೇಂದ್ರವಾದ ಸಹಸ್ರಾರ ಚಕ್ರದತ್ತ ಕೊಂಡೊಯ್ಯುತ್ತದೆ. ಸಹಸ್ರಾರ ಚಕ್ರವು ಅಸ್ತಿತ್ವದ ಅತ್ಯಂತ ಶುದ್ಧ ಆಧ್ಯಾತ್ಮಿಕ ಕ್ಷೇತ್ರವನ್ನು ಸಂಕೇತಿಸುತ್ತದೆ.
ಸ್ಥಳ:
ಆಜ್ಞಾ ಚಕ್ರವು ನಮ್ಮ ಮೆದುಳಿನಲ್ಲಿ, ದೃಷ್ಟಿನರಗಳ ಸಂಧಿ ಭಾಗವಾದ “ಆಪ್ಟಿಕ್ ಚಿಯಾಸ್ಮಾ” (ವೈದ್ಯಕೀಯ ಪದದಲ್ಲಿ) ಜಾಗದಲ್ಲಿದೆ , ಹಣೆಯ ಮಧ್ಯಭಾಗದಲ್ಲಿ ಸ್ಥಿರವಾಗಿದೆ . ಆಜ್ಞಾ ಚಕ್ರದ ಚೇತನವನ್ನು ಎರಡೂ ಕೈಗಳ ಉಂಗುರ ಬೆರಳುಗಳಲ್ಲಿ ಅನುಭವಿಸಬಹುದು.
ಬಣ್ಣ:
ಬೆಳ್ಳಿ ಬಣ್ಣವು ಆಜ್ಞಾ ಚಕ್ರವನ್ನು ಪ್ರತಿನಿಧಿಸುತ್ತದೆ. ಈ ಚಕ್ರವು ಬೆಳಕಿನ ತತ್ತ್ವದೊಂದಿಗೆ ಹೊಂದಾಣಿಕೆಯಾಗಿರುತ್ತದೆ.
ಆಜ್ಞಾ ಚಕ್ರದ ಗುಣಗಳು ಸೇರಿವೆ:
• ಕ್ಷಮೆ
• ಕರುಣೆ
• ವಿನಯ
• ನಿರ್ವಿಚಾರ ಸ್ಥಿಯ ಅರಿವು
• ಅಹಂಕಾರ ಮತ್ತು ಪ್ರತ್ಯಾಹಂಕಾರ
ಆಜ್ಞಾಚಕ್ರದ ಪ್ರಮುಖ ಗುಣವೆಂದರೆ ಕ್ಷಮೆ. ಈ ಚಕ್ರದ ಜಾಗೃತಿಯ ಮೂಲಕ ನಾವು ಇತರರನ್ನು ಮಾತ್ರವಲ್ಲ, ಮಾನವೀಯ ದೌರ್ಬಲ್ಯಗಳಿಗಾಗಿ ನಮ್ಮನ್ನೂ ಕ್ಷಮಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತೇವೆ. ಆಜ್ಞಾ ಚಕ್ರವನ್ನು “ಮೂರನೇ ಕಣ್ಣು” ಎಂದೂ ಕರೆಯುತ್ತಾರೆ. ಈ ಮೂರನೇ ಕಣ್ಣು ಎಂದರೆ ಅನೇಕ ಯೋಗಾಭ್ಯಾಸಿಗಳು ಹೇಳುವಂತೆ ಗುಪ್ತ ಚಿತ್ರಗಳನ್ನು ನೋಡುವುದು ಅಥವಾ ದಿವ್ಯದೃಷ್ಟಿಯನ್ನು ಪಡೆಯುವುದಲ್ಲ. ಬದಲಾಗಿ, ಇದು ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಪೂರ್ವಾಗ್ರಹಗಳಿಂದ ನಿರ್ಮಿತ ದೃಷ್ಟಿಕೋನವನ್ನು ಬದಲಿಸುವುದಾಗಿದೆ.
ಒಮ್ಮೆ ಒತ್ತಡಪೂರ್ಣ, ಬೇಜಾರು ಅಥವಾ ಅರ್ಥವಿಲ್ಲದಂತೆ ಕಾಣುತ್ತಿದ್ದ ಜೀವನವೇ ಆತ್ಮಸಾಕ್ಷಾತ್ಕಾರ ಮತ್ತು ಆಜ್ಞಾ ಚಕ್ರದ ಜಾಗೃತಿಯ ನಂತರ ಸಂತೋಷ, ಪ್ರೀತಿ ಮತ್ತು ಕರುಣೆಯಿಂದ ತುಂಬುತ್ತದೆ, ಏಕೆಂದರೆ ಆಗ ನಾವು ನಮ್ಮ ಜನ್ಮದ ನಿಜವಾದ ಉದ್ದೇಶವನ್ನು ಅರಿಯುತ್ತೇವೆ. ಸಂಪತ್ತು ಅಥವಾ ಕೊರತೆ ಯಾವುದೂ ನಮ್ಮನ್ನು ಅತಿಯಾಗಿ ಉಲ್ಲಾಸಗೊಳಿಸಲಾರದು ಅಥವಾ ನಿರಾಶೆಗೊಳಿಸಲಾರದು, ಏಕೆಂದರೆ ನಾವು ನಮ್ಮಆಧ್ಯಾತ್ಮಿಕ ಸ್ವಭಾವದ ಸತ್ಯದಲ್ಲಿ ನೆಮ್ಮದಿಯಿಂದ ನೆಲೆಸಿರುತ್ತೇವೆ.
ಈ ಉನ್ನತ ಸ್ಥಿತಿಯನ್ನು ತಲುಪಿದಾಗ, ಗೌತಮ ಬುದ್ಧರು ಜ್ಞಾನೋದಯದ ನಂತರ ತಮ್ಮ ಅರಮನೆಯ ಸುಖಸೌಕರ್ಯಗಳಿಗೆ ಮರಳಿ ಹೋಗಬೇಕೆಂದು ಯಾಕೆ ಅನಿಸಲೇ ಇಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ.
ಅನುಭವ ಮತ್ತು ಪ್ರಯೋಜನಗಳು:
ನಿಮ್ಮ ಆಜ್ಞಾ ಚಕ್ರವು ನಿಮ್ಮ ದೃಷ್ಟಿ, ಶ್ರವಣ ಮತ್ತು ಯೋಚನೆಗಳನ್ನು ನಿಯಂತ್ರಿಸುತ್ತದೆ. ಇದು ನಿಮ್ಮ ಪಿಟ್ಯೂಟರಿ ಗ್ರಂಥಿಯನ್ನೂ ನಿಯಂತ್ರಿಸುತ್ತದೆ. “ಮಾಸ್ಟರ್ ಗ್ರಂಥಿ” ಎಂದೂ ಕರೆಯಲಾಗುವ ಈ ಪ್ರಮುಖ ಗ್ರಂಥಿ, ದೇಹದ ಇತರೆ ಎಲ್ಲಾ ಅಂತರಸ್ರಾವಿ ಗ್ರಂಥಿಗಳನ್ನು ನಿಯಂತ್ರಿಸಿ, ಬೆಳವಣಿಗೆ, ದೈಹಿಕ ಪರಿಪಕ್ವತೆ, ಮೆಟಾಬಾಲಿಸಂ ಮತ್ತು ನಿದ್ರೆಯ ಮೇಲೆ ಪ್ರಭಾವ ಬೀರುತ್ತದೆ.
ಇಂದಿನ ದಿನಗಳಲ್ಲಿ ಅನೇಕರು ತಮ್ಮ ಉದ್ಯೋಗದ ಭಾಗವಾಗಿ ದೀರ್ಘಕಾಲ ಕಂಪ್ಯೂಟರ್ ಮುಂದೆ ಕೆಲಸ ಮಾಡುತ್ತಾರೆ. ಹಾಗೆಯೇ, ದೂರದರ್ಶನದ ಮುಂದೆ ಕೂಡ ಬಹಳ ಸಮಯ ಕಳೆಯುತ್ತಾರೆ. ಅತಿಯಾದ ದೃಶ್ಯ ಪ್ರೇರಣೆ ಆಜ್ಞಾ ಚಕ್ರವನ್ನು ದುರ್ಬಲಗೊಳಿಸಬಹುದು. ಅದೃಷ್ಟವಶಾತ್, ಸಹಜ ಯೋಗದ ನಿಯಮಿತ ಧ್ಯಾನಾಭ್ಯಾಸವು ಈ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ನಿಮ್ಮ ಎಡ ಆಜ್ಞಾ , ನಿಮ್ಮ ಮೆದುಳಿನ ಪ್ರತ್ಯಾಹಂಕಾರ ಭಾಗದೊಂದಿಗೆ ಸಂಪರ್ಕ ಹೊಂದಿದ್ದು, ಅದು ನೆನಪುಗಳು, ಅನುಭವಗಳು, ಅಭ್ಯಾಸಗಳು ಮತ್ತು ಭಾವನೆಗಳನ್ನು ಸಂಗ್ರಹಿಸುತ್ತದೆ. ಬಲ ಆಜ್ಞಾ , ಮೆದುಳಿನ ಅಹಂಕಾರ ಭಾಗದೊಂದಿಗೆ ಸಂಪರ್ಕ ಹೊಂದಿದ್ದು, ಅದು ಭವಿಷ್ಯದ ಕೇಂದ್ರೀಕೃತ ಯೋಚನೆ, ಯೋಜನೆ ಮತ್ತು ಕ್ರಿಯೆಯನ್ನು ನಿರ್ವಹಿಸುತ್ತದೆ. ಅಹಂಕಾರ ಮತ್ತು ಪ್ರತ್ಯಾಹಂಕಾರ ಎರಡೂ ಆಜ್ಞಾ ಚಕ್ರದಲ್ಲೇ ಒಂದಾಗುತ್ತವೆ.
ನಿಮ್ಮ ಎಡ ಆಜ್ಞಾ ಅತಿಯಾಗಿ ಸಕ್ರಿಯವಾಗಿದ್ದರೆ, ನಿಮ್ಮ ಪ್ರತ್ಯಾಹಂಕಾರ ಬಲೂನಿನಂತೆ ಊದಿಕೊಳ್ಳಬಹುದು. ಅತಿಯಾಗಿ ಭೂತಕಾಲದ ಮೇಲೆ ಗಮನಹರಿಸುವುದರಿಂದ ಅತಿಭಾವನಾತ್ಮಕ ಸ್ವಭಾವ, ಸ್ವಯಂ ಹಾನಿಕಾರಕ ಯೋಚನೆಗಳು ಅಥವಾ ವರ್ತನೆಗಳು ಬೆಳೆಯಬಹುದು.
ಅದೇ ರೀತಿ, ನಿಮ್ಮ ಬಲ ಆಜ್ಞಾ ಅತಿಯಾಗಿ ಸಕ್ರಿಯವಾಗಿದ್ದರೆ, ಅತಿಯಾದ ಯೋಚನೆ ಮತ್ತು ಯೋಜನೆಯಿಂದ ಅಹಂಕಾರವು ಬಲೂನಿನಂತೆ ಊದಿಕೊಳ್ಳುತ್ತದೆ. ಇದರಿಂದ ಅಶಾಂತಿ, ಪದೇಪದೇ ಕೋಪಗೊಳ್ಳುವುದು ಮತ್ತು ಇತರರ ಮೇಲೆ ಆಕ್ರಮಣಕಾರಿ ವರ್ತನೆ ಉಂಟಾಗಬಹುದು.
ಅದೃಷ್ಟವಶಾತ್, ಕುಂಡಲಿನಿ ಶಕ್ತಿಯು ಆಜ್ಞಾ ಚಕ್ರದ ಈ ಬಲೂನುಗಳ ಊದುವಿಕೆ ಯನ್ನು ಸಮತೋಲನಗೊಳಿಸಿ ಕುಗ್ಗಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಧ್ಯಾನದಿಂದ ಬರುವ ಮಾನಸಿಕ ಮೌನವು ನಮ್ಮಲ್ಲಿ ವಿನಯವನ್ನು ಬೆಳೆಸುತ್ತದೆ. ವಿನಯದ ಮೂಲಕ ನಾವು ಕ್ಷಮೆಯ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತೇವೆ.ಕ್ಷಮೆ ಎಂದರೆ ಸ್ವೀಕಾರ ಮತ್ತು ಚಿಕಿತ್ಸೆಯಾಗಿದೆ. ಅದು ಕೋಪ, ದ್ವೇಷ ಮತ್ತು ಅಸಮಾಧಾನದ ನಕಾರಾತ್ಮಕ ಬಂಧನಗಳಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ. ಕ್ಷಮಿಸುವುದರಿಂದ ನೀವು ಅಪಾರ ಶಾಂತಿ ಮತ್ತು ಹಗುರವಾದ ಅನುಭವವನ್ನು ಪಡೆಯುತ್ತೀರಿ.
ಸ್ವಯಂ - ವಿಶ್ಲೇಷಣೆ
ನಿಮ್ಮ ಆಜ್ಞಾ ಚಕ್ರವು ಹಿಡಿಯಲ್ಪಟ್ಟಿದ್ದರೆ, ನೀವು ನಿಮ್ಮನ್ನೇ ಅಥವಾ ಇತರರನ್ನು ಕ್ಷಮಿಸಲು ಅಸಮರ್ಥತೆಯನ್ನು ಅನುಭವಿಸಬಹುದು. ನೀವು ಭೂತಕಾಲದಲ್ಲೇ ಸಿಲುಕಿಕೊಂಡಿರಬಹುದು ಅಥವಾ ಸ್ವಯಂ ಕರುಣೆಯಲ್ಲಿ ಮುಳುಗಿರಬಹುದು.
ಅಹಂಕಾರ ಮತ್ತು ಆಕ್ರಮಣಕಾರಿ ಸ್ವಭಾವವೂ ಆಜ್ಞಾ ಅಸಮತೋಲನದ ಲಕ್ಷಣಗಳಾಗಿವೆ. ಹಾಗೆಯೇ ಅಶ್ಲೀಲ ವಿಷಯಗಳ ಮೇಲೆ ಆಸಕ್ತಿ ಅಥವಾ ವ್ಯತ್ಯಯ ಉಂಟುಮಾಡುವ ಲೈಂಗಿಕ ಕಲ್ಪನೆಗಳ ಮೇಲಿನ ಆಸಕ್ತಿಯೂ ಇದರ ಸೂಚನೆಯಾಗಬಹುದು. ಅತಿಯಾದ ಚಿಂತೆ, ಅತಿಯಾದ ಯೋಚನೆ ಮತ್ತು ಅತಿಯಾದ ಯೋಜನೆಯೂ ಆಜ್ಞಾ ಚಕ್ರದ ತಡೆಗೆ ಸೂಚಕವಾಗಿರಬಹುದು.
ಅಸಮತೋಲನದ ಕಾರಣಗಳು:
• ಕಟ್ಟುನಿಟ್ಟಿನ ಕಲ್ಪನೆಗಳು
• ಸ್ಥಿರವಾದ ವರ್ತನಾ ಮಾದರಿಗಳು
• ನಮ್ಮ ಕ್ರಿಯೆಗಳಲ್ಲಿ ಅತಿರೇಕಕ್ಕೆ ಹೋಗುವುದು
ಸಮತೋಲನಗೊಳಿಸುವ ವಿಧಾನ:
ಆಜ್ಞಾಚಕ್ರವನ್ನು ಸಮತೋಲನಗೊಳಿಸಲು, ಪ್ರಕೃತಿಯ ವಾತಾವರಣದಲ್ಲಿ ಧ್ಯಾನಾಭ್ಯಾಸ ಮಾಡಿ. ಹೊರಾಂಗಣದಲ್ಲಿ ಆಕಾಶವನ್ನು ನೋಡುತ್ತಾ ಧ್ಯಾನಿಸಲು ಪ್ರಯತ್ನಿಸಿ. ನೀವು ನಿಮ್ಮ ಬಲಗೈಯನ್ನು ನೆತ್ತಿಯ ಮೇಲೆ ಇಟ್ಟು, ತಲೆಯನ್ನು ಸ್ವಲ್ಪ ತಗ್ಗಿಸಿ, “ನಾನು ಎಲ್ಲರನ್ನೂ, ನನ್ನನ್ನೂ ಸೇರಿಸಿ ಕ್ಷಮಿಸುತ್ತೇನೆ” ಎಂದು ಹೇಳಬಹುದು. ಈ ಕ್ಷಮೆಯನ್ನು ನಿಮ್ಮ ಹೃದಯದಿಂದ ವ್ಯಕ್ತಪಡಿಸಲು ಪ್ರಯತ್ನಿಸಿ.
ಆಜ್ಞಾ ಚಕ್ರವನ್ನು ಸಮತೋಲನದಲ್ಲಿ ಇಡುವ ಅತ್ಯುತ್ತಮ ವಿಧಾನವೆಂದರೆ ಅತಿಯಾದ ಯೋಚನೆ ಮತ್ತು ಯೋಜನೆಯನ್ನು ತಪ್ಪಿಸುವುದು. ಪ್ರಸ್ತುತ ಕ್ಷಣದಲ್ಲಿ ಜೀವಿಸುವುದು – ಮತ್ತು ಪ್ರತಿಯೊಂದು ಕ್ಷಣವನ್ನೂ ಆನಂದಿಸುವುದು.